ಕೊರ್‍ನರ್, ಕಾರ್ಲ್ ಥಿಯೊಡರ್	
1791-1813. ರಾಷ್ಟ್ರಭಕ್ತಿಗೀತೆಗಳನ್ನು ರಚಿಸಿದ ಪ್ರಖ್ಯಾತ ಜರ್ಮನ್ ಕವಿ. ಹುಟ್ಟಿದ್ದು ಡ್ರೆಸ್‍ಡನ್‍ನಲ್ಲಿ. ಈತನ ತಂದೆ ಕ್ರಿಶ್ಚನ್ ಗಾಟ್‍ಫ್ರೆಡ್ ಕೊರ್‍ನರ್ ಸೆಕ್ಸಾನಿನ ನ್ಯಾಯಶಾಸ್ತ್ರ ಪಂಡಿತ. ಫ್ರೈಬರ್ಗ್, ಲೈಪ್‍ಸಿಗ್ ಮತ್ತು ಬರ್ಲಿನ್ ನಗರಗಳಲ್ಲಿ ವಿದ್ಯಾಭ್ಯಾಸ ಮುಗಿಸಿ, 1811ರಲ್ಲಿ ವಿಯೆನ್ನಕ್ಕೆ ತೆರಳಿದ. ಅಲ್ಲಿ ಫೆಡ್ರಿಕ್ ಮುಂತಾದ ಹೆಸರಾಂತ ಲೇಖಕರ ಸಂಪರ್ಕ ಬೆಳೆಸಿದ. ಈತನ ಮೊಟ್ಟಮೊದಲ ಕವನ ಸಂಕಲನ ನೊಸ್‍ಪೆನ್ 1810ರಲ್ಲಿ ಪ್ರಕಟಗೊಂಡಿತು. ವಿಯೆನ್ನದಲ್ಲೀತ ಅನೇಕ ಸುಖಾಂತ ಮತ್ತು ದುಃಖಾಂತ ನಾಟಕಗಳನ್ನು ರಚಿಸಿದ. ಅವುಗಳಲ್ಲಿ ಹಲಕೆಲವು ರಂಗಭೂಮಿಯ ಮೇಲೆ ಯಶಸ್ಸು ಗಳಿಸಿದವು. ತತ್ಫಲವಾಗಿ ಆಸ್ಥಾನ ನಾಟಕಕಾರನಾಗಿ ನೇಮಕಗೊಂಡ. ಜರ್ಮನಿಯ ಸ್ವಾತ್ರಂತ್ರ್ಯ ಹೋರಾಟಕ್ಕಾಗಿ ನಡೆಸಿದ ಲುಟ್‍ಜಿನ್‍ನ ಕ್ರಾಂತಿದಳಕ್ಕೆ ಸೇರಿದ. ಆಗ ಅನೇಕ ದೇಶಭಕ್ತಿಗೀತೆಗಳನ್ನು ರಚಿಸಿದ. ಈ ಕವನಗಳಲ್ಲಿ ಸಾಹಿತ್ಯಕ್ಕಿಂತ ಹೊನಲಾಗಿ ಹರಿಯುವ ದೇಶಭಕ್ತಿ ಮತ್ತು ಅಂದಿನ ರಾಜಕೀಯದ ವಾಸ್ತವ ಚಿತ್ರಣ ತುಂಬಿದ್ದುದರಿಂದ ಅವು ಹೆಚ್ಚು ಜನಪ್ರಿಯತೆ ಗಳಿಸಿದವು. ಮೆಕ್‍ಲೆನ್‍ಬರ್ಗ್‍ನ ಬಳಿ ನಡೆದ ಹೋರಾಟದಲ್ಲಿ ಈತ ಕೊಲೆಯಾದನಾದರೂ ಸ್ವಾತ್ರಂತ್ರ್ಯಕ್ಕಾಗಿ ಪ್ರಾಣ ತೆತ್ತ ಈ ಹುತಾತ್ಮ ಅಂದಿನ ಜನಮನದಲ್ಲಿ ಶಾಶ್ವತವಾಗಿ ನೆಲೆಸಿದ. ಮರಣಾನಂತರ ಈತನ ತಂದೆ ಲೈರ್ ಅಂಡ್ ಸೋರ್ಡ್ ಎಂಬ ಹೆಸರಿನಲ್ಲಿ ಈತನ ದೇಶಭಕ್ತಿ ಗೀತೆಗಳ ಸಂಕಲನವೊಂದನ್ನು ಪ್ರಕಟಿಸಿದ. ಜನಪದ ಸಾಹಿತ್ಯದಲ್ಲಿ ಅಸ್ತಿತ್ವವನ್ನು ಪಡೆದ ಇಲ್ಲಿನ ಕೆಲವು ಕವನಗಳು ಜರ್ಮನರ ಹೃದಯಗಳನ್ನು ಸೂರೆಗೊಂಡ ದೇಶಭಕ್ತಿಗೀತೆಗಳಾಗಿ ಇಂದಿಗೂ ಉಳಿದಿವೆ. 											*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ